ಪಾರಂಪರಿಕ ತಿಳಿವಳಿಕೆಯ ಆಕರಗಳು
ರಸರತ್ನಾಕರ
    1. ಕೃತಿಯ ಹೆಸರು : ರಸರತ್ನಾಕರ
    2. ಲೇಖಕನ ಹೆಸರು : ಸಾಳ್ವ
    3. ಕಾಲ : ಹದಿನಾರನೆಯ ಶತಮಾನ, (ಸುಮಾರು ಕ್ರಿ.ಶ.1550)
    4. ವಸ್ತು : ಕಾವ್ಯಮೀಮಾಂಸೆ (ಅಲಂಕಾರ ಶಾಸ್ತ್ರ)
    5. ಕಿರು ಪರಿಚಯ : ರಸರತ್ನಾಕರವು ಹದಿನಾರನೆಯ ಶತಮಾನದ ಜೈನ ಕವಿಯಾದ ಸಾಳ್ವನು ಬರೆದಿರುವ, ಕಾವ್ಯಮೀಮಾಂಸೆಯನ್ನು ಕುರಿತ ಪುಸ್ತಕ. ಇದಲ್ಲದೆ ಸಾಳ್ವನು ಸಾಳ್ವ ಭಾರತ ಮತ್ತುವೈದ್ಯ ಸಾಂಗತ್ಯ ಎಂಬ ಇನ್ನೆರಡು ಕೃತಿಗಳನ್ನು ಬರೆದಿದ್ದಾನೆ. ಹೆಸರೇ ಹೇಳುವಂತೆ, ರಸರತ್ನಾಕರವು ಸಂಸ್ಕೃತ ಕಾವ್ಯಮೀಮಾಂಸೆಯಲ್ಲಿ ಬರುವ ರಸವೆಂಬ ಪರಿಕಲ್ಪನೆಯು ಬೆಳೆದುಬಂದ ಬಗೆಯನ್ನು ವಿವರಿಸುವ ಪುಸ್ತಕ. ಅವನು ರುದ್ರಭಟ್ಟ, ಅಮೃತನಂದಿ, ಹೇಮಚಂದ್ರ ಮುಂತಾದ ಅಲಂಕಾರ ಶಾಸ್ತ್ರಜ್ಞರಿಗೆ ಋಣಿಯಾಗಿದ್ದಾನೆ. ಅವನು ತನಗೆ ಅಗತ್ಯವಾದ ನಿದರ್ಶನಗಳನ್ನು ಪಂಪ, ರನ್ನ, ನಾಗಚಂದ್ರ ಮುಂತಾದ ಕನ್ನಡ ಕವಿಗಳಿಂದ ಆರಿಸಿಕೊಂಡಿದ್ದಾನೆ. ಕೆಲವೊಮ್ಮೆ ಸಂಸ್ಕೃತ ಕಾವ್ಯಗಳಿಂದ ಆಯ್ದ ಉದಾಹರಣೆಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾನೆ.
      ರಸರತ್ನಾಕರದಲ್ಲಿ ಅನುಕ್ರಮವಾಗಿ ಶೃಂಗಾರ ಪ್ರಪಂಚ, ನಾಯಕನಾಯಿಕಾ ಪ್ರಪಂಚ, ನವರಸ ಪ್ರಕರಣ ಮತ್ತು ವ್ಯಭಿಚಾರಿಭಾವ ಎಂಬ ನಾಲ್ಕು ಭಾಗಗಳಿವೆ. ಈ ಪುಸ್ತಕಕ್ಕೆ ಅನುಬಂಧವಾಗಿ ಧ್ವನಿತತ್ವವನ್ನು ಪರಿಚಯಿಸುವ ಶಾರದಾವಿಳಾಸ ಎಂಬ ಬರವಣಿಗೆಯಿದೆ.
    6. ಪ್ರಕಟಣೆಯ ಚರಿತ್ರೆ : ಈ ಕೃತಿಯ ಮೊದಲನೆಯ ಅಧ್ಯಾಯದಿಂದ ಆರಿಸಿದ ಸುಮಾರು 120 ಪದ್ಯಗಳನ್ನು, 1893 ರಲ್ಲಿ ಬುಧಜನ ಮನೋರಂಜಿನಿ ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಲಾಯಿತು. ಸಮಗ್ರ ಕೃತಿಯು, 1932 ರಲ್ಲಿ, ಮದ್ರಾಸ್ ವಿಶ್ವವಿದ್ಯಾಲಯದಿಂದ ಪ್ರಕಟವಾಯಿತು. ಅದರ ಸಂಪಾದಕರು ಎ. ವೆಂಕಟರಾವ್ ಮತ್ತು ಎಚ್. ಶೇಷ ಅಯ್ಯಂಗಾರ್. 1971 ರಲ್ಲಿ ಅದನ್ನು ರಾಮಚಂದ್ರ ಕೊಟ್ಟಲಗಿಯವರು ಸಂಪಾದಿಸಿ, ಧಾರವಾಡದ ಸಮಾಜ ಪುಸ್ತಕಾಲಯದಿಂದ ಪ್ರಕಟಿಸಿದರು. ಮೂರನೆಯ ಆವೃತ್ತಿಯನ್ನು ಎಚ್.ಕೆ. ನರಸಿಂಹೇಗೌಡರು, 1972 ರಲ್ಲಿ ಸಂಪಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಸಂಸ್ಥೆಯು ಅದನ್ನು ಪ್ರಕಟಿಸಿದೆ.
    7. ಮುಂದಿನ ಓದು :
    8. ಅನುವಾದ :

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು